Friday, August 12, 2011

ಹೊಸ ಚಾನಲ್ ಕದಂಬ 24/7


ಸುದ್ದಿ ವಿಶ್ಲೇಷಣೆ, ಮಾತಿನ ಸುರಿಮಳೆ ಇಷ್ಟಪಡುವ ಕೋಟ್ಯಂತರ ಕನ್ನಡ ವೀಕ್ಷಕರ ಮನೆ ಬಾಗಿಲಿಗೆ ಮತ್ತೊಂದು ಸುದ್ದಿ ವಾಹಿನಿ ಬರಲಿದೆ. ಈ ಸುದ್ದಿ ವಾಹಿನಿಯ ಹೆಸರು "ಕದಂಬ 24/7". ಈ ಹೊಸ ಚಾನಲ್ ಸೂತ್ರಧಾರ ಎಚ್ ಆರ್ ರಂಗನಾಥ್. ಸದ್ಯಕ್ಕೆ ಹೊಸ ವಾಹಿನಿಗೆ ಸಿಬ್ಬಂದಿ ಆಯ್ಕೆ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು ಶೀಘ್ರದಲ್ಲೆ "ಕದಂಬ 24/7" ಚಾನಲ್ ಆರಂಭವಾಗಲಿದೆ.

ಈ ಮೂಲಕ ಕನ್ನಡ ಎಲೆಕ್ಟ್ರಾನಿಕ್ ಮಾಧ್ಯಮ ಕ್ಷೇತ್ರಕ್ಕೆ ಮತ್ತೊಂದು ಚಾನಲ್ ಸೇರ್ಪಡೆಯಾಗಲಿದೆ. ಸುವರ್ಣ , ಸಮಯ , ಜನಶ್ರೀ ಹಾಗೂ ಟಿವಿ 9 ಸುದ್ದಿ ವಾಹಿನಿಗಳಿಗೆ ಪ್ರಬಲ ಸ್ಪರ್ಧಿಯಾಗಿ "ಕದಂಬ" ಉದಯವಾಗುತ್ತಿರುವುದು ವಿಶೇಷ. ಹೊಸ ಚಾನಲ್ ಕುಲಗೋತ್ರಗಳಿಗಾಗಿ ದಟ್ಸ್‌ಕನ್ನಡ ನಿರೀಕ್ಷಿಸುತ್ತಿರಿ.

ಅಂದಹಾಗೆ 'ಕದಂಬ' ವಂಶವು ಕನ್ನಡದ ಮೊಟ್ಟ ಮೊದಲ ರಾಜ ವಂಶ. ಕನ್ನಡದಲ್ಲಿ ದೊರೆತಿರುವ ಮೊಟ್ಟಮೊದಲ ಶಾಸನವಾದ ಹಲ್ಮಿಡಿ ಶಾಸನವು ಕದಂಬರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಉತ್ತರ ಕನ್ನಡ ಜಲ್ಲೆಯ ಬನವಾಸಿಯಿಂದ ಆಳುತ್ತಿದ್ದ ಕರ್ನಾಟಕದ ಒಂದು ಪುರಾತನ ರಾಜವಂಶ. ಕನ್ನಡವನ್ನು ರಾಜ್ಯಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು. ಹೊಸ ವಾಹಿನಿಗೆ ಅವರ ಹೆಸರಿಟ್ಟಿರುವುದು ಗಮನಾರ್ಹ.

ಜನಪ್ರಿಯತೆಯತ್ತ ಜನಶ್ರೀ ವಾಹಿನಿ ದಾಪುಗಾಲು

ಎಲ್ಲರ ಊಹೆಯನ್ನೂ ಜನಶ್ರೀ ವಾಹಿನಿ ಉಲ್ಟಾಪಲ್ಟಾ ಮಾಡಿದೆ. ಎಲ್ಲಿ ಈ ವಾಹಿನಿ ರೆಡ್ಡಿ ಸಹೋದರರ ತುತ್ತೂರಿಯಾಗುತ್ತದೋ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ತನ್ನ ವಿಭಿನ್ನ ಕಾರ್ಯಕ್ರಮಗಳ ಮೂಲಕ ನಾಡಿನ ನಾಡಿಮಿಡಿತಕ್ಕೆ ಸೂಕ್ತವಾಗಿ ಸ್ಪಂದಿಸುತ್ತಿದೆ.

ನಾಡಿನ ಸಮಸ್ತ ಚಾನಲ್‌ಗಳು ತಮ್ಮ ದಿನಚರಿಯನ್ನು ಜ್ಯೋತಿಷ್ಯ, ಭವಿಷ್ಯದ ಮೂಲಕ ಆರಂಭಿಸಿದರೆ ಜನಶ್ರೀ ಮಾತ್ರ ಇದಕ್ಕೆ ತದ್ವಿರುದ್ಧ. ನಿರುದ್ಯೋಗಿ ಯುವಕ ಯುವತಿಯರಿಗೆ ಉಪಯುಕ್ತವಾದ ಉದ್ಯೋಗವಕಾಶಗಳ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಾ ಯುವಕರಿಗೆ ನೆರವಾಗುತ್ತಿದೆ.

ಜನಶ್ರೀ ವಾಹಿನಿಯಲ್ಲಿ ಇನ್ನೂ ಹಲವಾರು ಉಪಯುಕ್ತ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಸುದ್ದಿಯ ಪ್ರಸಾರದಲ್ಲಿ ವೇಗವಿಲ್ಲ ಹಾಗೂ ಧಂ ಇಲ್ಲ ಎಂಬ ಆರೋಪಗಳನ್ನು ಹೊರತುಪಡಿಸಿದರೆ, ರೋಚಕವಾಗಿ ಬಿಂಬಿಸುವ, ದಿಗಿಲು ಹುಟ್ಟಿಸುವಂತೆ ಪ್ರಸಾರ ಮಾಡುವ ಸಾಹಸ ಮಾತ್ರ ಕೈಹಾಕಿಲ್ಲ.

ರೆಡ್ಡಿ ಸೋದರರ ಮಾಲೀಕತ್ವದ ವಾಹಿನಿಯಾದರೂ ಅವರ ನಿಲುವು ಒಲವುಗಳನ್ನು ಬದಿಗಿಟ್ಟು ವಾಹಿನಿಯನ್ನು ಜಾಣ್ಮೆಯಿಂದ ಮುನ್ನಡೆಸುತ್ತಿದ್ದಾರೆ ಅನುಭವಿ ಪತ್ರಕರ್ತ ಅನಂತ ಚಿನಿವಾರ್.